ಕ್ಯಾರಿ, ವಿಲಿಯಂ
ಕ್ರೈಸ್ತಧರ್ಮದ ಪ್ರಚಾರಕ್ಕಾಗಿ ಭಾರತಕ್ಕೆ ಬಂದ ಪ್ರಮುಖ ಪಾದ್ರಿ, ಶಿಕ್ಷಣತಜ್ಞ, ಸಮಾಜ ಸುಧಾರಕ. ಮೊಚ್ಚೆ ಹೊಲಿಯುವ ವೃತ್ತಿಯಿಂದ ಆರಂಭಿಸಿ ಬ್ಯಾಪ್ಟಿಸ್ಟ್ ಮಿಷನರಿಯಾಗಿ ಕಲ್ಕತ್ತಕ್ಕೆ ಬಂದ (1793). ಇತರ ಪಾದ್ರ್ರಿಗಳೊಂದಿಗೆ ಸೆರಾಂಪುರದಲ್ಲಿ ನೆಲಸಿ ಪ್ರಚಾರ ಕಾರ್ಯದಲ್ಲಿ ನಿರತನಾದ. ಈತ ಬಂಗಾಳಿ ಭಾಷೆಯನ್ನು ಕಲಿತನಲ್ಲದೆ ತನ್ನ ಮುನ್ಷಿಯಾಗಿದ್ದ ರಾಂರಾಂ ಬೋಸನ ನೆರವಿನಿಂದ ಬೈಬಲನ್ನು ಬಂಗಾಳಿಗೆ ಭಾಷಾಂತರಿಸಿದ. ಬಂಗಾಳಿಯಲ್ಲಿ ಹಲವು ಗದ್ಯಕೃತಿಗಳನ್ನು ರಚಿಸಿದ್ದಾನೆ. ಅವುಗಳಲ್ಲಿ ಪ್ರಸಿದ್ಧವಾದ್ದು ಕಥೋಪಕಥನ. ಈತ ದಿಗ್ದರ್ಶನ ಮತ್ತು ಸಮಾಚಾರ ದರ್ಪಣ ಎಂಬೆರಡು ಬಂಗಾಳಿ ಪತ್ರಿಕೆಗಳ ಪ್ರಕಟಣೆಗೆ ನೆರವಾದ. ಇವನು ಕಲ್ಕತ್ತೆಯ ಫೋರ್ಟ್ ವಿಲಿಯಂ ಕಾಲೇಜಿನಲ್ಲಿ ಸಂಸ್ಕøತ ಮತ್ತು ಬಂಗಾಳಿ ಭಾಷೆಗಳ ಅಧ್ಯಾಪಕನಾದ್ದು 1801ರಲ್ಲಿ. 1831ರಲ್ಲಿ ಈತ ತೀರಿಕೊಳ್ಳುವವರೆಗೂ ಆ ಹುದ್ದೆಯಲ್ಲಿದ್ದ. ಈ ಕಾಲದಲ್ಲಿ ಇವನು ಬಂಗಾಳಿಯಲ್ಲಿ ಚರಿತ್ರೆ, ತತ್ತ್ವಶಾಸ್ತ್ರ, ಐತಿಹ್ಯಗಳು ಮತ್ತು ಕಥೆಗಳ ಪುಸ್ತಕಗಳನ್ನು ಬರೆಯಲು ಅನೇಕರಿಗೆ ಪ್ರೋತ್ಸಾಹ ನೀಡಿದ. ಪಾಶ್ಚಾತ್ಯ ವಿಜ್ಞಾನ ಮತ್ತು ಇಂಗ್ಲಿಷ್ ಸಾಹಿತ್ಯವನ್ನು ಭಾರತೀಯರಿಗೆ ಬೋಧಿಸಬೇಕೆಂಬುದಾಗಿ ಪ್ರತಿಪಾದಿಸುತ್ತಿದ್ದ. ಲಾರ್ಡ್ ವಿಲಿಯಂ ಬೆಂಟಿಂಕನ ಪಾಶ್ಚಾತ್ಯ ಶಿಕ್ಷಣ ನೀತಿಯ ಮೇಲೆ ಕ್ಯಾರಿಯ ಅಭಿಪ್ರಾಯಗಳು ಪ್ರಭಾವ ಬೀರಿದುವು. ಮಕ್ಕಳನ್ನು ಗಂಗೆಯಲ್ಲಿ ಮತ್ತು ಸಮುದ್ರದಲ್ಲಿ ಎಸೆಯುವ ಪದ್ಧತಿಯನ್ನು ನಿಲ್ಲಿಸುವ ಕ್ರಮವನ್ನು ಲಾರ್ಡ್ ವೆಲ್‍ಸ್ಲಿ ಕೈಗೊಳ್ಳಲು ಇವನೇ ಕಾರಣ. ಈತ ಸಹಗಮನ ಪದ್ಧತಿಯನ್ನೂ ಪ್ರಬಲವಾಗಿ ವಿರೋಧಿಸಿದನಲ್ಲದೆ ಹಿಂದೂಗಳಲ್ಲಿ ಈ ಪದ್ಧತಿಯ ವಿರುದ್ಧ ಜನಾಭಿಪ್ರಾಯವನ್ನು ಕ್ರೋಡೀಕರಿಸಿದ.

ಬಹುಭಾಷಾ ವಿಶಾರದನಾದ ಕ್ಯಾರಿಗೆ ಕನ್ನಡ ಭಾಷೆಯೂ ಬರುತ್ತಿತ್ತೆಂಬುದೂ ಆತ 1817ರಲ್ಲಿ ಕನ್ನಡ ಭಾಷೆಗೆ ಇಂಗ್ಲಿಷಿನಲ್ಲಿ ಒಂದು ವ್ಯಾಕರಣವನ್ನು ಬರೆದನೆಂಬುದೂ ಗಮನಾರ್ಹವಾದ ಸಂಗತಿ.      		 	(ಎನ್.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ